ಇದು ’ಶಾಲಾತಂತ್ರ. ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರ ವಿದ್ಯಾಧಿಕಾರಿಗಳಿಗೆ ದಾಖಲೆಸಲ್ಲಿಸುವ, ಇರಿಸಿಕೊಳ್ಳುವ ಕೆಲಸದಲ್ಲಿ ಸಮಯ ಉಳಿಸುವ ವಿದ್ಯುನ್ಮಾನ ಸೌಲಭ್ಯ. ಶಿಕ್ಷಕರಾಗಿ ಅಗತ್ಯವಾಗಿ ಮಾಡಲೇಬೇಕಾಗಿರುವ ಬೋಧನಾಪ್ರಕ್ರಿಯೆಗೆ ಸಮಯಹೊಂದಿಸಲು ಇರುವ ಸುಲಭಮಾರ್ಗ.

ಶಿಕ್ಷಣಕ್ಕೆ ಸಂಬಂಧಿಸಿದ ಸರಕಾರದ ವಿವಿಧ ಯೋಜನೆಗಳ ಅನುಷ್ಠಾನ ಮತ್ತು ಕಾರ್ಯಕ್ರಮಗಳಿಗೆ ಶಾಲೆಗಳು, ಅಂಕಿ ಅಂಶಗಳನ್ನು ಶಿಕ್ಷಣ ಇಲಾಖೆಗೆ ಕಾಲ ಕಾಲಕ್ಕೆ ಒದಗಿಸುವುದು ಬಹಳ ಮುಖ್ಯವಾಗಿರುತ್ತದೆ. ಸಾಮಾನ್ಯವಾಗಿ ಹೆಚ್ಚಿನ ಶಿಕ್ಷಣ ಸಂಸ್ಥೆಗಳಲ್ಲಿ ಶಾಲೆಯ ಅಧ್ಯಾಪಕರು/ ಮುಖ್ಯೋಪಾಧ್ಯಾಯರು ಈ ಕೆಲಸವನ್ನು ಮಾಡಬೇಕಾಗುತ್ತದೆ. ಪ್ರೌಢಶಾಲೆಗಳಲ್ಲಿ ಗುಮಾಸ್ತರಿದ್ದರೂ ಶಿಕ್ಷಕರು ಕೆಲವೊಂದು ಕೆಲಸಗಳಲ್ಲಿ ಭಾಗಿಯಾಗಬೇಕಾಗುತ್ತದೆ. ಅಂಕಿ ಅಂಶಗಳನ್ನು ಇಲಾಖೆಗೆ ಒದಗಿಸುವ ಈ ಕೆಲಸವು ಪುನರಾವರ್ತನೆಯ ಕೆಲಸವಾಗಿದ್ದರೂ,ಬಹಳ ಜಾಗೂರತೆಯಿಂದ ಮತ್ತು ಸಮರ್ಪಕವಾಗಿ ತಪ್ಪಿಲ್ಲದೆ ಮಾಡಬೇಕಾಗುತ್ತದೆ.

ಒಮ್ಮೆ ಬೇಕಾದ ವಿವರಗಳನ್ನು ಕಂಪ್ಯೂಟರ್ ಗೆ ತಪ್ಪಿಲ್ಲದೆ ಒದಗಿಸಿದರೆ, ಕಾಲ ಕಾಲಕ್ಕೆ ಪದೇ ಪದೇ ಬೇಕಾಗಿರುವ ವರದಿಗಳನ್ನು ತಪ್ಪಿಲ್ಲದೆ ಕಂಪ್ಯೂಟರ್ ಮೂಲಕ ಪಡೆದು ಕೊಳ್ಳುವುದು ಅತಿ ಸುಲಭದ ಕೆಲಸ ಎಂದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಇಂತಹ ಕೆಲಸಗಳನ್ನು ಕಂಪ್ಯೂಟರ್ ಮಾಡುವುದರಿಂದ ಅದೇ ಸಮಯವನ್ನು ಅಧ್ಯಾಪಕರು ಅಧ್ಯಾಪನಕ್ಕೆ ತೊಡಗಿಸಿಕೊಂಡರೆ ಅವರಿಗೆ ಕೆಲಸದಲ್ಲಿ ತೃಪ್ತಿ, ಕರ್ತವ್ಯಪಾಲನೆಯಾದಂತೆ. ಇದರಿಂದ ಮಕ್ಕಳ ಕಲಿಕೆಯ ಅಭಿವೃದ್ಧಿಯೂ ಆಗುತ್ತದೆ, ಇದು ಮುಖ್ಯ. ಅದಕ್ಕಾಗಿ ಅವರಿಗಿರುವ ಬೋಧನೇತರ ಕೆಲಸ ಹಗುರವಾಗಲೆಂದು ಈ ತಂತ್ರಾಂಶವನ್ನು ಅಭಿವೃದ್ಧಿಪಡಿಸಿ ಶಾಲೆಗಳ ಉಪಯೋಗಕ್ಕಾಗಿ ಬಿಡುಗಡೆ ಮಾಡಲಾಗಿದೆ. ಈ ತಂತ್ರಾಂಶವು ಬರೀ ಸರಕಾರಿ ಶಾಲೆಗಳಿಗೆ ಮಾತ್ರವಲ್ಲ, ಅನುದಾನಿತ, ಅನುದಾನರಹಿತ ಶಾಲೆಗಳಿಗೂ ಉಪಯೋಗಕಾರಿಯಾಗಲಿದೆ.

ಕಾಲ ಕಾಲಕ್ಕೆ ಶಿಕ್ಷಣ ಇಲಾಖೆಗೆ ಒದಗಿಸಬೇಕಾದ ವರದಿಗಳಾದ ಅಧ್ಯಾಪಕರ ಪಟ್ಟಿ, ತರಗತಿ/ಪ್ರವರ್ಗ/ಧರ್ಮಕ್ಕನುಸಾರವಾಗಿ ಮಕ್ಕಳ ದಾಖಲಾತಿ/ ಹಾಜರಾತಿ, ಪರೀಕ್ಷಾ ಫಲಿತಾಂಶ, ಬಿಸಿ ಊಟಕ್ಕೆ ಸಂಬಂಧಿಸಿದ ಪದಾರ್ಥಗಳ ದಾಸ್ತಾನು/ಸ್ವೀಕೃತಿ/ಬಳಕೆ, ಶಾಲಾ ಅನುದಾನ/ಹಣದ ಸ್ವೀಕೃತಿ/ಬಳಕೆ, ಖರ್ಚಿನ ವಿವರ ಇತ್ಯಾದಿಗಳನ್ನು ಈ ತಂತ್ರಾಂಶದ ಮೂಲಕ ಶಾಲೆಯ ಗಣಕಯಂತ್ರದಲ್ಲಿ ದಾಖಲಿಸಬಹುದು. ಅಗತ್ಯವೆನಿಸಿದಾಗ ಪೂರಕ/ ಬದಲಾವಣೆಗೊಂಡ ಮಾಹಿತಿಗಳನ್ನು ಸೇರಿಸಬಹುದು. ಪ್ರಿಂಟರ್ ಇದ್ದಲ್ಲಿ ಪ್ರತಿತೆಗೆದು ಅಥವಾ ’ನಮೂನೆ’ ಇದ್ದಲ್ಲಿ ಭರ್ತಿ ಮಾಡಿ ಸಂಬಂಧಪಟ್ಟವರಿಗೆ ಕಳಿಸಬಹುದು.

ಈ ತಂತ್ರಾಂಶದ ಸಹಾಯದಿಂದ ಯಾವುದೇ ಶಾಲೆಯಲ್ಲಿನ ಸುಮಾರು 99% ಕ್ಕೂ ಮೀರಿದ ದೈನಂದಿನ ಕೆಲಸಗಳನ್ನು ಗಣಕೀಕರಿಸಲು ಸಾಧ್ಯವಿದ್ದು ಶಾಲೆಯ ಉಪಾಧ್ಯಾಯರ ಮತ್ತು ಸಿಬ್ಬಂದಿ ವರ್ಗದ ಸಮಯದ ಉಳಿತಾಯವಾಗಲಿದ್ದು ಅವರ ಸಮಯದ ಸದ್ಬಳಕೆಯಾಗಲಿದೆ. ಹಾಗೆ ಉಳಿಸಿಕೊಂಡ ಸಮಯವನ್ನು ಪಾಠ ಮಾಡಲು ಅಥವಾ ಪಠ್ಯೇತರ ಚಟುವಟಿಕೆಗೆ ಬಳಸಿಕೊಂಡು ಮಕ್ಕಳ ಅಭಿವೃದ್ಧಿಗಾಗಿ ದುಡಿಯಬಹುದು.

ಇಷ್ಟೆಲ್ಲ ಅನುಕೂಲ ಇರುವ ತಂತ್ರಾಂಶದ ಬೆಲೆ- ಶೈಕ್ಷಣಿಕ ಪ್ರಗತಿಯಕಡೆಗೆ ನೀವು ಹೊಂದುವ ಬದ್ಧತೆ ಮಾತ್ರ.

ಇದನ್ನು www.FREEganita.com ಮತ್ತು www.eShale.org ಪ್ರಾಯೋಜಿಸಿ, ಅಭಿವೃದ್ಧಿಪಡಿಸಿ ನಿಮ್ಮ ಮುಂದೆ ಇಡುತ್ತಿದೆ. ಇದು ಅವುಗಳ ಹಲವಾರು ಯೋಜನೆಗಳಲ್ಲಿ ಒಂದಾಗಿರುತ್ತದೆ.

ಶಾಲಾತಂತ್ರ’ ವು ಉಚಿತ ತಂತ್ರಾಂಶವಾಗಿದ್ದು ಅದನ್ನು ಮತ್ತು ಅದಕ್ಕೆ ಅಗತ್ಯವಿರುವ ಇತರ ತಂತ್ರಾಂಶಗಳನ್ನು ಇಲ್ಲಿಂದ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದು. ಇವುಗಳನ್ನು ಸಿಡಿ ರೂಪದಲ್ಲೂ ಪಡೆಯಬಹುದು(ಸಂಪರ್ಕಿಸಿ ಪುಟ ನೋಡಿ).