ಪದೇ ಪದೇ ಕೇಳುವ ಪ್ರಶ್ನೆಗಳು:
1. ಹೆಸರನ್ನು ಹೇಗೆ ನಮೂದಿಸಬೇಕು?
ಇನಿಶಿಯಲ್ ಅಥವಾ ಉಪನಾಮವನ್ನು ಕೊನೆಯಲ್ಲಿ ನಮೂದಿಸಿ.
ತಪ್ಪು |
ಸರಿ |
ಕೋಟ ವಾಸುದೇವ ಪೈ |
ವಾಸುದೇವ ಪೈ ಕೋಟ |
ಹೆಚ್ ರಮೇಶ |
ರಮೇಶ ಹೆಚ್ |
ಪಾಟೀಲ್ ಪುಟ್ಟಪ್ಪ |
ಪುಟ್ಟಪ್ಪ ಪಾಟೀಲ್ |
2. ದಿನಾಂಕಗಳನ್ನು ಹೇಗೆ ನಮೂದಿಸಬೇಕು?
DD/MM/YYYY ರೀತಿಯಲ್ಲಿ ನಮೂದಿಸಿ. ಉದಾ : 03/04/2010
3. ಈ ತಂತ್ರಾಂಶವನ್ನು ಉಪಯೋಗಿಸಲು ಶುರು ಮಾಡಿದಾಗ ಶಾಲೆಗೆ ಯಾವುದೇ ರೀತಿಯ ಕೋಡ್ ನ್ನು ಇಲಾಖೆಯವರು ನೀಡಿಲ್ಲ. ಮುಂದೆ ನೀಡಿದಾಗ ಅದನ್ನು ಬದಲಿಸಲು ಸಾಧ್ಯವೇ?
ಮಾದರಿಗಾಗಿ ಶಾಲೆಯೊಂದರ ವಿವರಗಳನ್ನು ತಂತ್ರಾಂಶದಲ್ಲಿ ಮೊದಲೇ ಒದಗಿಸಿದ್ದು ಕೋಡ್ ಸಹಿತ ಅಲ್ಲಿನ ಎಲ್ಲಾ ವಿವರಗಳನ್ನು ಯಾವುದೇ ಸಮಯದಲ್ಲಿ ಬದಲಿಸಬಹುದು.
4. ವಿದ್ಯಾರ್ಥಿಯ ಅಡ್ಮಿಶನ್ ಸಂಖ್ಯೆಯು ತಪ್ಪಾಗಿ ಗಣಕದಲ್ಲಿ ನಮೂದಿಸಲ್ಪಟ್ಟಿದ್ದರೆ ಅದನ್ನು ಸರಿಪಡಿಸುವುದು ಹೇಗೆ?
ಯಾವುದೇ ದಾಖಲೆಯನ್ನು ಗಣಕದಿಂದ ತೆಗೆಯುವ ಸೌಲಭ್ಯವನ್ನು ಒದಗಿಸದೇ ಇರುವುದರಿಂದ, ಅಕಸ್ಮಾತ್ ಯಾವುದೇ ವಿದ್ಯಾರ್ಥಿಯ ವಿವರಗಳನ್ನು ತೆಗೆಯಲೇ ಬೇಕಾದಲ್ಲಿ, ಅಂತಹ ವಿದ್ಯಾರ್ಥಿಯು ಶಾಲೆಯನ್ನು ಬಿಟ್ಟಿರುವುದಾಗಿ, ಒಂದು ದಿನಾಂಕವನ್ನು ಸೂಚಿಸಿ. ಆನಂತರ, ಅಂತಹ ವಿದ್ಯಾರ್ಥಿಗಳ ವಿವರಗಳು ಯಾವುದೇ ವರದಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ.
5. ಶಾಲಾ ಆರಂಭದ ನಂತರ ವಿದ್ಯಾರ್ಥಿ ಹೊಸದಾಗಿ ವಿದ್ಯಾರ್ಥಿ ಸೇರಿದರೆ ಏನು ಮಾಡಬೇಕು?
ಸೇರಿದ ವಿದ್ಯಾರ್ಥಿಗಳ ವಿವರಗಳನ್ನು ’ವಿದ್ಯಾರ್ಥಿಗಳು’ ಸ್ಕ್ರೀನ್ ನಲ್ಲಿ ನೀಡಿದರೆ ಸೇರಿದ ದಿನಾಂಕದ ಹಾಜರಾತಿ ಪಟ್ಟಿಯಲ್ಲಿ ಆತನ ಹೆಸರು ತಾನಾಗೆ ಸೇರಿಕೊಳ್ಳುತ್ತದೆ.
6. ವಿದ್ಯಾರ್ಥಿಯ ವಿಭಾಗದ(ಸೆಕ್ಷನ್) ಬದಲಾವಣೆಯನ್ನು ಎಲ್ಲಿ ಮಾಡಬೇಕು?
’ವಿದ್ಯಾರ್ಥಿಗಳು’ ಸ್ಕ್ರೀನ್ ನಲ್ಲಿ ಬದಲಿಸಿ. ಬದಲಿಸಿದ ದಿನದಿಂದ ಆರಂಭಿಸಿ, ಹಾಜರಾತಿ ತೆಗೆದಾಗಲೆಲ್ಲ ತಾನಾಗಿ ತರಗತಿಯ ದೈನಿಕ ಹಾಜರಾತಿ ಪಟ್ಟಿಯಲ್ಲಿ ಆ ಬದಲಾವಣೆ ಕಾಣಿಸಿಕೊಳ್ಳುತ್ತದೆ.
7. ಹೊಸದಾಗಿ ಗಣಕೀಕರಣ ಆರಂಭಿಸಿದಾಗ ಹಾಜರಾತಿ ಪಟ್ಟಿಯನ್ನು ವರ್ಷದ ಆರಂಭದ ದಿನದಿಂದ ಆರಂಭಿಸಬೇಕೇ?
ಬೇಕಿಲ್ಲ. ವರ್ಷದಲ್ಲಿನ ಯಾವುದೇ ತಾರೀಕಿನಿಂದ ಆರಂಭಿಸಬಹುದು. ಆಗ ವಿದ್ಯಾರ್ಥಿಗಳ ನೋಂದಣಿ(ಅಡ್ಮಿಶನ್ ರಿಜಿಸ್ಟರ್) ಆಧಾರದ ಮೇಲೆ ಅದನ್ನು ಸಿದ್ಧಪಡಿಸಲಾಗುವುದು.
8. ಹೊಸದಾಗಿ ಗಣಕೀಕರಣ ಆರಂಭಿಸಿದಾಗ ಬಿಸಿ ಊಟದ ಲೆಕ್ಕಾಚಾರವನ್ನು ವರ್ಷದ ಆರಂಭದ ದಿನದಿಂದ ಆರಂಭಿಸಬೇಕೇ?
ಬೇಕಿಲ್ಲ. ವರ್ಷದಲ್ಲಿನ ಯಾವುದೇ ತಾರೀಕಿನಿಂದ ಆರಂಭಿಸಬಹುದು. 'ಬಿಸಿ ಊಟದ ಪದಾರ್ಥಗಳ ಸ್ವೀಕೃತಿ' ಸ್ಕ್ರೀನ್ ಮೂಲಕ ಆರಂಭದ ದಾಸ್ತಾನು/ಮೌಲ್ಯಗಳನ್ನು ನೀಡಬೇಕು. ಆದರೆ ಒಮ್ಮೆ ಲೆಕ್ಕ ಅರಂಭಿಸಿದ ಮೇಲೆ ತಿರುಗ ಆರಂಭಿಕ ದಾಸ್ತಾನು/ಮೌಲ್ಯಗಳನ್ನು ಬದಲಿಸಲು ಆಗುವುದಿಲ್ಲ.
9. ವಿದ್ಯಾರ್ಥಿಗಳಿಗೆ ನಮೂದಿಪಡಿಸಿರುವ ಆಹಾರ ಪದಾರ್ಥಗಳ/ಸಾದಿಲ್ವಾರು ಹಣದ ಪ್ರಮಾಣದಲ್ಲಿ ಬದಲಾವಣೆ ಇದ್ದರೆ ಎನು ಮಾಡಬೇಕು?
ಈ ವಿವರಗಳನ್ನು ತರಗತಿಗನುಗುಣವಾಗಿ ’ಬಿಸಿ ಊಟದ ಪ್ರಮಾಣ’ ಸ್ಕ್ರೀನ್ ನಲ್ಲಿ ನಮೂದಿಸಿ. ಆದರೆ ಈ ಪರಿಮಾಣಗಳನ್ನು ತಿಂಗಳ ಮಧ್ಯದಿಂದ ಜಾರಿಗೆ ಬರುವಂತೆ ಬದಲಿಸದಿರುವುದು ಒಳ್ಳೆಯದು.
10. ಗಣಕದಲ್ಲಿನ ದಾಸ್ತಾನಿಗೂ ಉಗ್ರಾಣದಲ್ಲಿ ಇರುವ ದಾಸ್ತಾನೂ ವ್ಯತ್ಯಾಸವಿದ್ದರೆ ಏನು ಮಾಡಬೇಕು?
ಈ ವ್ಯತ್ಯಾಸವನ್ನು ನಷ್ಟ ಎಂದು ’ಬಿಸಿ ಊಟದ ಪದಾರ್ಥಗಳ ಸ್ವೀಕೃತಿ’ ಸ್ಕ್ರೀನ್ ನಲ್ಲಿ + ಅಥವ – ಎಂದು ನಮೂದಿಸಿ ಸರಿತೂಗಿಸಬಹುದು + ಚಿಹ್ನೆಯೊಂದಿಗೆ ಪ್ರಮಾಣವನ್ನು ನೀಡಿದರೆ ದಾಸ್ತಾನು ಕಡಿಮೆ ಆಗುತ್ತದೆ. - ಚಿಹ್ನೆಯೊಂದಿಗೆ ನೀಡಿದರೆ ದಾಸ್ತಾನು ಹೆಚ್ಚುತ್ತದೆ.
11. ಬಿಸಿ ಊಟ ಯಾವ ದಿನಾಂಕದ ವರೆಗೆ ಲೆಕ್ಕ ಹಾಕಲಾಗಿದೆ ಎಂದು ಹೇಗೆ ಗೊತ್ತಾಗುತ್ತದೆ?
’ಬಿಸಿ ಊಟದ ಪದಾರ್ಥಗಳ ಸ್ವೀಕೃತಿ’ ಮತ್ತು ’ಬಿಸಿ ಊಟದ ಲೆಕ್ಕ/ದೈನಿಕ ಹಾಜರಾತಿಯ ಧೃಢೀಕರಣ’ ದ ಸ್ಕ್ರೀನ್ ನಲ್ಲಿ ಇತ್ತೀಚಿನ ಬಿಸಿ ಊಟ ಲೆಕ್ಕ ಹಾಕಿದ ದಿನಾಂಕ ಕಾಣಿಸಿಕೊಳ್ಳುತ್ತದೆ.
12.ಅಧ್ಯಾಪಕರ ವಿವರಗಳನ್ನು ತಪ್ಪಾಗಿ ನಮೂದಿಸಿದರೆ ಸರಿಪಡಿಸುವುದು ಹೇಗೆ?
ಹೆಸರನ್ನೂ ಸೇರಿ ಎಲ್ಲಾ ವಿವರಗಳನ್ನು ಯಾವಾಗ ಬೇಕಾದರೂ ಬದಲಿಸಬಹುದು. ಯಾವುದೇ ದಾಖಲೆಯನ್ನು ಗಣಕದಿಂದ ತೆಗೆಯುವ ಸೌಲಭ್ಯವನ್ನು ಒದಗಿಸದೇ ಇರುವುದರಿಂದ,ಅಕಸ್ಮಾತ್ ವಿವರಗಳನ್ನು ತೆಗೆಯಲೇ ಬೇಕಾದಲ್ಲಿ, ಅಂತಹ ಅಧ್ಯಾಪಕರು ಸೇವೆಯಿಂದ ನಿವೃತ್ತಿಯಾಗಿರುವುದಾಗಿ ಒಂದು ದಿನಾಂಕವನ್ನುಸೂಚಿಸಿ. ಆನಂತರ ಅಂತಹ ಅಧ್ಯಾಪಕರ ವಿವರಗಳು ಯಾವುದೇ ವರದಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ.
13.ವಿವರಗಳನ್ನು ತಪ್ಪಾಗಿ ನೀಡಿದ್ದನ್ನು ಸರಿ ಪಡಿಸುವುದು ಹೇಗೆ ?
ಕೆಲವು ತಪ್ಪು ಮಾಹಿತಿಯನ್ನು ನೀಡಿದ್ದರೂ, ಈ ಹಿಂದೆ ಉತ್ತರಿಸಿದಂತೆ ಆ ಮಾಹಿತಿಗಳನ್ನು ಸರಿಪಡಿಸಬಹುದು( ಉದಾ: ಅಧ್ಯಾಪಕರ ವಿವರ, ವಿದ್ಯಾರ್ಥಿ ವಿವರ, ಬಿಸಿ ಊಟದ ವಸ್ತುಗಳ ದಾಸ್ತಾನಿನಲ್ಲಿ ವ್ಯತ್ಯಾಸ, ತಪ್ಪು ಹಾಜರಾತಿ) ಇವುಗಳನ್ನು ಹೊರತುಪಡಿಸಿ ಸರಿಪಡಿಸಲಾಗದಂತಹ ತಪ್ಪುಗಳಾಗಿದ್ದರೆ ಇತ್ತೀಚಿನ ಹಿಂದಿನ ದಿನದ ಬ್ಯಾಕ್ ಅಪ್(ಎಕ್ಸ್ಪೋರ್ಟ್) ಮಾಡಿದಂತಹ ಫೈಲ್ ನ್ನು ತಿರುಗ ರಿಸ್ಟೋರ್( ಇಂಪೋರ್ಟ್) ಮಾಡಿ ಆ ಹಿಂದಿನ ದಿನಾಂಕದಿಂದ ಕೆಲಸವನ್ನು ಮುಂದುವರಿಸಬಹುದು.
14. ಈ ತಂತ್ರಾಂಶವನ್ನು ವಿದ್ಯುಕ್ತವಾಗಿ ಬಳಸುವ ಮುಂಚೆ ಇದರ ಕಾರ್ಯವನ್ನು ಸರಿಯಾಗಿ ಪರಿಚಯಸಿಕೊಳ್ಳುವುದು ಹೇಗೆ?
ಮಾದರಿಗಾಗಿ ಕೆಲವು ದಾಖಲೆ/ವಿವರಗಳನ್ನು ನಾವು ಉಳಿಸಿರುತ್ತೇವೆ. ಅವುಗಳನ್ನು ಪರಿಶೀಲಿಸಲು ’ನಿರ್ವಹಣೆ’ ಟ್ಯಾಬ್ ನಲ್ಲಿನ ರಿಸ್ಟೋರ್ ಆಯ್ಕೆಯ ಮೂಲಕ shaledata_1sample.exp ಎನ್ನುವ ಫೈಲ್ ನ್ನು ಆಯ್ಕೆಮಾಡಿ ’ರಿಸ್ಟೋರ್’ ಗುಂಡಿ ಒತ್ತಿ. ಆಗ ಮಾದರಿಗಾಗಿ ಸಂಗ್ರಹಿಸಿದ ವಿವರಗಳು ಡೇಟಾಬೇಸ್ ನಲ್ಲಿ ಸೇರಿಕೊಳ್ಳುತ್ತವೆ. ಅವುಗಳನ್ನು ನೋಡುವ ವಿಧಾನಕ್ಕಾಗಿ ಇಲ್ಲಿ ಕ್ಲಿಕ್ಕಿಸಿ. ಸಂಪೂರ್ಣ ಕಲಿತುಕೊಂಡ ಮೇಲೆ, ’ಎಲ್ಲವನ್ನು ಅಳಿಸು’ ಸ್ಕ್ರೀನ್ ಮೂಲಕ ಇಲ್ಲಿಯವರೆಗೆ ಪ್ರಾಯೋಗಿಕವಾಗಿ ಉಳಿಸಿದ ಎಲ್ಲಾ ವಿವರಗಳನ್ನು ತೆಗೆದು, ಪುನ: ಹೊಸದಾಗಿ ತಂತ್ರಾಂಶವನ್ನು ಬಳಸಲು ಆರಂಭಿಸಬಹುದು.
15. ಬ್ಯಾಕ್ ಅಪ್ /ರಿಸ್ಟೋರ್ ಗಳನ್ನು ಯಾವಾಗೆಲ್ಲ ಮಾಡಬೇಕು?
ವಿದ್ಯುತ್ ಕಡಿತ, ಗಣಕ ಯಂತ್ರದ ಕಾರ್ಯದಲ್ಲಿನ ವ್ಯತ್ಯಯ, ಈ ತಂತ್ರಾಂಶ ಉಪಯೋಗಿಸುವವರ ಅಜಾಗರೂಕತೆಯಿಂದ, ಹಾಗೂ ಇನ್ನಿತರ ಕಾರಣಗಳಿಂದ ಗಣಕ ಯಂತ್ರದಲ್ಲಿನ ದತ್ತಾಂಶಗಳು(ಡೇಟಾ) ಹಾಳಾಗುವ ಸಾಧ್ಯತೆಗಳಿರುತ್ತವೆ. ಆದುದರಿಂದಾಗಿ ದತ್ತಾಂಶಗಳನ್ನು ಸುರಕ್ಷಿತವಾಗಿ ಒಂದೆಡೆ ಕಾಪಾಡಿಕೊಂಡು ಬರಬೇಕಾಗುತ್ತದೆ (ಬ್ಯಾಕ್ಅಪ್). ಅದೇ ರೀತಿ ಅಲ್ಲಿಂದ, ಅಗತ್ಯ ಬಿದ್ದಾಗ ಸ್ವಸ್ಥಾನಕ್ಕೆ ಕಾಪಿ ಮಾಡಿಕೊಳ್ಳಬೇಕಾಗುತ್ತದೆ(ರಿಸ್ಟೋರ್). ಬ್ಯಾಕ್ಅಪ್ ನ್ನು ಪದೇ ಪದೇ ಮಾಡಬೇಕು, ಆದರೆ ರಿಸ್ಟೋರ್ ನ್ನು ಗಣಕ ಕೆಟ್ಟು ಹೋದಾಗ ಮತ್ತು ಕೆಲವು ಅಪರೂಪದ ಸಂದರ್ಭಗಳಲ್ಲಿ ಮಾಡಿದರೆ ಸಾಕು. ಈ ಎರಡೂ ಪ್ರಕ್ರಿಯೆಗೆ ನಿಮ್ಮ ಗಣಕಯಂತ್ರದಲ್ಲಿ ಸಾಕಷ್ಟು ಜಾಗ ಇರಬೇಕು (ಡಿಸ್ಕ್ ಸ್ಪೇಸ್) ಬ್ಯಾಕ್ಅಪ್ ನ್ನು ಆಗಾಗ( ವಾರದಲ್ಲಿ ಒಮ್ಮೆಯಾದರೂ ) ಮಾಡುತ್ತಿರಬೇಕು. ರಿಸ್ಟೋರ್ ನ್ನು ಅಗತ್ಯ ಬಿದ್ದಾಗ ( ಗಣಕ ಯಂತ್ರ ಕೆಟ್ಟು ಹೋದಾಗ/ಬದಲಿಸಿದಾಗ, ಅಜಾಗರೂಕತೆಯಿಂದ ತಪ್ಪು ಮಾಹಿತಿ ನೀಡಿ ದತ್ತಾಂಶಗಳು ಉಪಯೋಗಿಸುವ ಸ್ಥಿತಿಯಲ್ಲಿ ಇಲ್ಲದಾಗ) ಮಾಡಿದರೆ ಸಾಕು.
16. ಗಣಕಯಂತ್ರವನ್ನು ಬದಲಿಸಿದ್ದೇವೆ. ದತ್ತಾಂಶವನ್ನು ಉಳಿಸಿಕೊಂಡು ಮುಂದುವರಿಯುವುದು ಹೇಗೆ?
ಮೊತ್ತ ಮೊದಲು, ಪ್ರಥಮ ಬಾರಿ ಗಣಕೀಕರಣ ಆರಂಭಿಸುವಾಗ ಮಾಡಿದಂತೆ ’ಶಾಲಾ ತಂತ್ರ” ತಂತ್ರಾಂಶವನ್ನು ಅನುಸ್ಥಾಪಿಸಬೇಕು. 'admin/headmaster' ಬಳಸುವವ ಆಗಿ ಪ್ರವೇಶ ಪಡೆಯಿರಿ. ಆನಂತರ ಇತ್ತೀಚಿನ ಬ್ಯಾಕ್ ಅಪ್ ಮಾಡಿರುವ ಫೈಲ್ ನಿಂದ ದತ್ತಾಂಶ ಗಳನ್ನು ರಿಸ್ಟೋರ್( ಪ್ರಶ್ನೆ 15 ನೋಡಿ) ಮಾಡಬೇಕು.
17. ಕೆಲವು ವರದಿಗಳನ್ನು .ods ನಮೂನೆಯಲ್ಲಿ ಕೊಟ್ಟಿರುವಿರಿ. ಅದನ್ನು ಬಳಸುವುದು ಹೇಗೆ?
.ods ನಮೂನೆಯು, ಅಂತರ ರಾಷ್ಟ್ರೀಯವಾಗಿ ಬಳಕೆಯಲ್ಲಿರುವ ಹಾಗೂ ಸರ್ವಮಾನ್ಯವಾಗಿರುವ ಒಂದು ಪ್ರಮಾಣೀಕೃತ ನಮೂನೆ. ಇದನ್ನು ಬಳಸಲು 'ಓಪನ್ ಆಫೀಸ್' ಎನ್ನುವ ಒಂದು ಮುಕ್ತ ಮತ್ತು ಉಚಿತ ತಂತ್ರಾಂಶ ಬೇಕಾಗುತ್ತದೆ. ಅದನ್ನು ’ಶಾಲಾ ತಂತ್ರ’ ದ ಜೊತೆಗೆ ನೀಡಲಾಗುತ್ತಿದ್ದು,ಅದನ್ನು ಮೊದಲು ಅನುಸ್ಥಾಪಿಸಕೊಳ್ಳಬೇಕು. ಈ ತಂತ್ರಾಂಶವನ್ನು ಉಪಯೋಗಿಸುವ ವಿಧಾನವನ್ನು ವಿವರವಾಗಿ ’ಗಣಕ123' ಎನ್ನುವ ಸೀಡಿಯಲ್ಲಿ ವಿವರಿಸಲಾಗಿದೆ. ಅದನ್ನು ನೋಡಿ/ಕೇಳಿ ಕಲಿತುಕೊಳ್ಳಬಹುದು.
18. ಹಲವು ವರದಿಗಳನ್ನು .ods ನಮೂನೆಯಲ್ಲಿ ಕೊಟ್ಟಿದ್ದು .xls ನಮೂನೆಯಲ್ಲಿ ಏಕೆ ನೀಡಿಲ್ಲ?
ಓಪನ್ ಆಫೀಸ್ ಎನ್ನುವುದು ಒಂದು ಮುಕ್ತ ಮತ್ತು ಉಚಿತ ತಂತ್ರಾಂಶ. ಇದನ್ನು ಯಾರೂ ಬೇಕಾದರೂ ಕಾಪಿ ಮಾಡಿ ಹಂಚಬಹುದು ಹಾಗೂ ಬಳಸಬಹುದು. ಆದರೆ .xls ನಮೂನೆಯಲ್ಲಿ ಕೊಟ್ಟರೆ ಮೈಕ್ರೋಸಾಫ್ಟ್ ನವರ, ’ಆಫೀಸ್’ ಎನ್ನುವ ಉಚಿತವಲ್ಲದ ತಂತ್ರಾಂಶವನ್ನು ಬಳಸಬೇಕಾಗುತ್ತದೆ. ಹೆಚ್ಚಿನವರು ಅದನ್ನು ಕೊಂಡುಕೊಳ್ಳದೆ ಅನಧಿಕೃತವಾಗಿ ಉಪಯೋಗಿಸುತ್ತಿರುವರು. ಎಕ್ಸೆಲ್ ತಂತ್ರಾಂಶ ಬಳಸುವವರು, ಅಗತ್ಯ ಕಂಡಲ್ಲಿ, ಓಪನ್ ಆಫೀಸ್ ನಲ್ಲಿ .ods ಫೈಲ್ ನ್ನು ತೆರೆದು, .xls ನಮೂನೆಯಲ್ಲಿ ಉಳಿಸಿಕೊಂಡು, ಎಕ್ಸೆಲ್ ತಂತ್ರಾಂಶವನ್ನು ಬಳಸಲು ಸಾಧ್ಯವಿದೆ. ಒಟ್ಟಿನಲ್ಲಿ, ಎಲ್ಲವರಿಗೂ ಅನುಕೂಲವಾಗಲಿ ಎಂದು .ods ನಮೂನೆಯಲ್ಲಿ ಕೆಲವು ವರದಿಗಳನ್ನು ನೀಡಲಾಗಿದೆ.
19. ಪಾಸ್ವರ್ಡ್ ಮರತರೆ ಏನು ಮಾಡುವುದು?
ಹಲವಾರು ಮುಖ್ಯ ವಿಷಯಗಳನ್ನು ಹೊಂದಿರುವ ದಾಖಲೆಗಳ ಸಮರ್ಪಕ ಕಾರ್ಯನಿರ್ವಹಣೆಗಾಗಿ ಪಾಸ್ವರ್ಡ್ ಬಹಳ ಮುಖ್ಯವಾಗಿರುತ್ತದೆ. ಈ ತಂತ್ರಾಂಶದಲ್ಲಿ , ಒಬ್ಬರಿಗಿಂತ ಇಬ್ಬರು ಲೇಸು ಎನ್ನುವ ನಾಣ್ಣುಡಿಯಂತೆ 'admin' ಮತ್ತು 'headmaster' ಎನ್ನುವ ಇಬ್ಬರು ಬಳಸುವವರು(ಯೂಸರ್ಸ್) ಇರುತ್ತಾರೆ. ತಂತ್ರಾಂಶವನ್ನು ಅನುಸ್ಥಾಪಿಸಿದ ಸಮಯದಲ್ಲಿ ಇವರಿಗೆ ಮೊದಲೇ ನಿಗದಿಪಡಿಸಿದ ಪಾಸ್ವರ್ಡ್ ಇರುತ್ತದೆ. ಅನುಸ್ಥಾಪಿಸಿದ ಕೂಡಲೇ ಇವರಿಬ್ಬರ ಪಾಸ್ವರ್ಡ್ ನ್ನು ಬದಲಿಸುವುದು ಬಹಳ ಮುಖ್ಯ. ಇದರಿಂದಾಗಿ ಇಲ್ಲಿನ ದಾಖಲೆಗಳನ್ನು ಅನಧಿಕೃತವಾಗಿ ಯಾರಿಗೂ ಬದಲಿಸಲು ಮತ್ತು ನಾಶಪಡಿಸಲು ಸಾಧ್ಯವಾಗುವುದಿಲ್ಲ. ಅಕಸ್ಮಾತ್ ಆಗಿ, ಮೇಲೆ ತಿಳಿಸಿದ ಇಬ್ಬರ ಪಾಸ್ವರ್ಡ್ ಮರತು ಹೋದಲ್ಲಿ ನಿಮ್ಮ ಬ್ರೌಸರ್ ನಲ್ಲಿ http://localhost/shale/forgotpassword.php ಎಂದು ನಮೂದಿಸಿ. ಅಲ್ಲಿ ಕಾಣಿಸುವ ಸ್ಕ್ರೀನ್ ನಲ್ಲಿ ನೀಡಿದ ಎಲ್ಲಾ ವಿವರಗಳು ಸರಿ ಇದ್ದಲ್ಲಿ 'admin' ಮತ್ತು 'headmaster' ಗಳ ಪಾಸ್ವರ್ಡ್ ಗಳು ತಂತ್ರಾಂಶವನ್ನು ಅನುಸ್ಥಾಪಿಸಿದಾಗ ನೀಡುವ ಮೂಲ ಪಾಸ್ವರ್ಡ್ ಗಳಿಗೆ ಬದಲಾಗುತ್ತವೆ. ಇದಾದ ಮೇಲೆ ಇವುಗಳ ಪಾಸ್ವರ್ಡ್ ಗಳನ್ನು ಬದಲಿಸಿ. ಇಷ್ಟೆಲ್ಲಾ ಮಾಡಿಯೂ ಮೂಲ ಪಾಸ್ವರ್ಡ್ ಗಳನ್ನು ಮರಳಿ ಪಡೆಯಲು ಸಾಧ್ಯವಾಗದಿದ್ದಲ್ಲಿ ನಮ್ಮನ್ನು ನೇರವಾಗಿ ಸಂಪರ್ಕಿಸಿ.
20. ಕೆಲವು ವಿವರಗಳು ಕನ್ನಡದಲ್ಲಿ ಟೈಪ್ ಆಗುತ್ತದೆ. ಇದನ್ನು ಇಂಗ್ಲಿಷ್ ಗೆ ಬದಲಿಸಲು ಸಾಧ್ಯವೇ?
ಎಲ್ಲರಿಗೂ ಸುಲಭವಾಗಲೆಂದು, ಅಂಕಿ ಅಂಶ ಇರುವ ವಿವರಗಳು ಮತ್ತು ಸಂಖ್ಯೆಗಳು ’ಹಿಂದೂ -ಅರೇಬಿಕ್’ ಸಂಖ್ಯೆಗಳಲ್ಲಿ ಟೈಪ್ ಆಗುತ್ತವೆ. ಹೆಚ್ಚಿನ ಗಣಕ ಯಂತ್ರ ಬಳಸುವವರು, ಒಂದು ರೀತಿಯ ಭೀತಿಯಿಂದ ತಂತ್ರಾಂಶವನ್ನು ಉಪಯೋಗಿಸಲು ಹಿಂಜರಿಯುತ್ತಾರೆ. ಹೆಚ್ಚಿನ ತಂತ್ರಾಂಶಗಳು ಇಂಗ್ಲಿಷ್ ಬಳಸುವುದರಿಂದ ಈ ಭೀತಿ ಇನ್ನೂ ಹೆಚ್ಚು. ಇದನ್ನು ಸ್ವಲ್ಪಮಟ್ಟಿಗೆ ಹೋಗಲಾಡಿಸುವ ಉದ್ದೇಶದಿಂದ ಹೆಸರು, ವಿಳಾಸ ಮುಂತಾದ ವಿವರಗಳು ಕನ್ನಡದಲ್ಲೇ ಮೂಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಕೀ ಪ್ಯಾಡ್ ನ ಮೇಲಿನ ಸಾಲಿನಲ್ಲಿರುವ F12 ಕೀ ಒತ್ತುವ ಮೂಲಕ ಇಂಗ್ಲಿಷ್ ಮತ್ತು ಕನ್ನಡದಲ್ಲಿ ವಿವರಗಳು ಮೂಡುವಂತೆ ಪರ್ಯಾಯವಾಗಿ ಬದಲಿಸುತ್ತಾ ಹೋಗಬಹುದು.
21. .ods ಫೈಲ್ ಗಳಲ್ಲಿ ಕನ್ನಡದಲ್ಲಿನ ವಿವರಗಳು ಸರಿಯಾಗಿ ಮೂಡಿ ಬರುತ್ತಿಲ್ಲ.
ಇಲ್ಲಿನ ಯುನಿಕೋಡ್ ಫಾಂಟ್ ಗಳು Tahoma ಎನ್ನುವ ಶೈಲಿಯನ್ನು ಉಪಯೋಗಿಸುವುದರಿಂದ ಈ ಸಮಸ್ಯೆ ಉದ್ಭವಿಸುತ್ತದೆ. ಅದನ್ನು Tunga ಎನ್ನುವ ಫಾಂಟ್ ಗೆ ಬದಲಿಸಿದರೆ, ಈ ಸಮಸ್ಯೆ ಪರಿಹಾರವಾಗುತ್ತದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ’ಶಾಲಾ ತಂತ್ರ’ ತಂತ್ರಾಂಶ ದ ಅನುಸ್ಥಾಪನಾ ಕೈಪಿಡಿಯಲ್ಲಿ ಸೂಚಿಸಿದೆ. ಅಲ್ಲಿ ವಿವರಿಸಿದಂತೆ ಸೂಚನೆಗಳನ್ನು ಪಾಲಿಸಿ.
22. ವರದಿಗಳು ಯಾವುದೇ ಪೂರ್ವನಿಗದಿತ ನಮೂನೆಯಲ್ಲಿ ಏಕೆ ಇಲ್ಲ?
ವಿವಿಧ ವಲಯದ ಶಿಕ್ಷಣ ಅಧಿಕಾರಿಗಳು ವರದಿಗಳನ್ನು ಬೇರೆ ಬೇರೆ ರೂಪದಲ್ಲಿ ಕೇಳುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ನಿರ್ದಿಷ್ಟ ನಮೂನೆ ಇಲ್ಲದೇ ಇರುವುದರಿಂದ ವರದಿಗಳನ್ನು ಯಾವುದೇ ನಮೂನೆಯಲ್ಲಿ ಸಿದ್ಧಪಡಿಸಿಲ್ಲ. ಆದರೆ ಯಾವುದೇ ನಮೂನೆಯನ್ನು ತುಂಬಿಸಲು ಬೇಕಾಗುವ ಮಾಹಿತಿಗಳು ಇಲ್ಲಿನ ವರದಿಗಳಲ್ಲಿ ಸಿಗುತ್ತವೆ. ಅಲ್ಲಿಂದ ವಿವರಗಳನ್ನು ಪಡೆದು ನಮೂನೆಗಳಲ್ಲಿ ಭರ್ತಿಮಾಡಬಹುದು.
23. ಸ್ಕ್ರೀನ್ ನಲ್ಲಿ ನ ವರದಿಗಳನ್ನು ಫೈಲ್ ರೂಪದಲ್ಲಿ ಉಳಿಸಿ ಮುದ್ರಿಸಲು ಸಾಧ್ಯವೇ?
ಸಾಧ್ಯವಿದೆ. ಯಾವುದೇ ಸ್ಕ್ರೀನ್ ನ ವಿವರದ ಮೇಲೆ Ctrl+P ಒತ್ತಿ. ಆಗ ತೆರೆದುಕೊಳ್ಳುವ ಕಿಂಡಿಯಲ್ಲಿ Name ಎದುರು PDFCreator ಎಂದು ನಮೂದಿಸಿ(PDFCreator ನ್ನು ಸಿಡಿಯಿಂದ/ಅಂತರ್ಜಾಲದಿಂದ ಮೊದಲೇ ಅನುಸ್ಥಾಪಿಸಿರಬೇಕು). ಅನುಭವದಿಂದ Properties ನಲ್ಲಿನ ವಿವರಗಳನ್ನು ಬೇಕಿದ್ದರೆ ಬದಲಿಸಿ. Ok ಒತ್ತಿ. ಇನ್ನೊಮ್ಮೆ ತೆರೆದುಕೊಳ್ಳುವ ಕಿಟಕಿಯಲ್ಲಿ ವಿವರಗಳನ್ನು ಅಗತ್ಯವಿದ್ದರೆ ಬದಲಿಸಿದ ನಂತರ Save ಒತ್ತಿ, ಆಗ ನಿಮಗೆ pdf ರೂಪದ ಫೈಲ್ ಸಿದ್ಧಗೊಳ್ಳುತ್ತದೆ. ಅದನ್ನು ಬೇರೆಡೆ ಉಳಿಸಿಕೊಳ್ಳಬಹುದು ಅಥವಾ ಮುದ್ರಿಸಬಹುದು. ಹಾಗೆಯೇ ಕೆಲವು ವರದಿಗಳನ್ನು Ods ರೂಪದಲ್ಲಿ ನೀಡಲಾಗಿದ್ದು. ಅವುಗಳನ್ನು ಓಪನ್ ಆಫೀಸ್ ಮೂಲಕ ತೆರೆದು, ಅಲ್ಲಿನ ವಿವರಗಳನ್ನು ಬದಲಿಸಿ/ಹೊಸದಾಗಿ ಸೇರಿಸಿ ಬೇರೆಡೆ ಉಳಿಸಿಕೊಳ್ಳಬಹುದು ಅಥವಾ ಮುದ್ರಿಸಬಹುದು.
24. ಅಕೌಂಟ್ ಮಾಸ್ಟರ್ ನಲ್ಲಿನ ಕೋಡ್ /ಹೆಸರನ್ನು ಹೇಗೆ ಬದಲಿಸಬಹುದು?
ಒಮ್ಮೆ ನೀಡಿದ ಕೋಡ್ ಗಳನ್ನು ಬದಲಿಸಲು ಸಾಧ್ಯವಿಲ್ಲ. ಆದರೆ ’ಅಕೌಂಟ್ ಮಾಸ್ಟರ್ ’ ಸ್ಕ್ರೀನ್ ನಲ್ಲಿ ಈಗಾಗಲೇ ಇರುವ ಅಕೌಂಟ್ ಕೋಡ್ ನ್ನು ನೀಡಿ ಅವುಗಳ ಹೆಸರನ್ನು ಬದಲಿಸಬಹುದು.
25. ಅಕೌಂಟ್ಸ್ ಗಳ ಶಿಲ್ಕನ್ನು ಬದಲಿಸಲು ಸಾಧ್ಯವೇ?
ಖಾತೆಗಳ ಶಿಲ್ಕು ೦ ಆಗಿದ್ದಲ್ಲಿ ಮಾತ್ರ ಶಿಲ್ಕನ್ನು ಆರಂಭಿಕ ಶಿಲ್ಕು ಸ್ಕ್ರೀನ್ ನಲ್ಲಿ ಬದಲಿಸಬಹುದು. ಆನಂತರ ಬದಲಿಸಲು ಸಾಧ್ಯವಿಲ್ಲ.
26. ಆಯವ್ಯಯ ಪಟ್ಟಿ ಸ್ಕ್ರೀನ್ ನಲ್ಲಿ ಎಲ್ಲಾ ದಿನಗಳ ವಿವರ ಬೇಕಿಲ್ಲವಾದರೆ ಏನು ಮಾಡಬೇಕು?
ಇಲ್ಲಿ ಯಾವ ದಿನಾಂಕದಿಂದ ಯಾವ ದಿನಾಂಕದವರೆಗೆ ವಿವರಗಳು ಬೇಕು ಎಂದು ತಿಳಿಸಬಹುದು. ದಿನಾಂಕಗಳನ್ನು ನೀಡದಿದ್ದರೆ ಆ ದಿನಗಳಿಗೆ ಸಂಬಂಧಿಸಿದ ನಿರ್ಬಂಧ ಇರುವುದಿಲ್ಲ.
27. ಬ್ಯಾಂಕ್ ಬಡ್ಡಿ/ದೇಣಿಗೆ ಯಂತಹ ಮೂಲಗಳಿಂದ ಹಣವನ್ನು ಸ್ವೀಕರಿಸಿದಾಗ ವಿವಿಧ ಬಾಬತ್ತುಗಳಿಗೆ ಹಣವನ್ನು ನಿಗದಿಪಡಿಸುವುದು ಹೇಗೆ?
ಅಂತಹ ಮೂಲಗಳಿಂದ ಹಣವನ್ನು ಸ್ವೀಕರಿಸಿದಾಗ ವಿವಿಧ ಬಾಬತ್ತುಗಳಿಗೆ ಹಣವನ್ನು ನಿಗದಿಪಡಿಸಲು ಸಾಧ್ಯವಿಲ್ಲ. ಬದಲಿಗೆ ಅಂತಹ ಹಣವನ್ನು ’ಬ್ಯಾಂಕ್ ಖಾತೆಗೆ/ಕೈಯಲ್ಲಿ ನಗದು’ ಖಾತೆಗಳಿಗೆ ಸ್ವೀಕೃತಿ/ ಆದಾಯ(ಅಕೌಂಟ್ಸ್) ಸ್ಕ್ರೀನ್ ಮೂಲಕ ವರ್ಗಾಯಿಸಬಹುದು.’ವರ್ಗಾವಣೆ ಮಾತ್ರ’ ಎನ್ನುವ ಬಾಬತ್ತು ಅನ್ನು ಆಯ್ದುಕೊಳ್ಳಿ.
28. ಒಂದು ಬ್ಯಾಂಕ್ ಖಾತೆಯಿಂದ ಇನ್ನೊಂದಕ್ಕೆ ಅಥವಾ ನಗದು ಖಾತೆಗೆ ಹೇಗೆ ಹಣವನ್ನು ವರ್ಗಾಯಿಸಬಹುದು?
ವ್ಯಯ(ಅಕೌಂಟ್ಸ್) ಸ್ಕ್ರೀನ್ ಮೂಲಕ ಒಂದು ಚರ ಆಸ್ತಿಯ ಖಾತೆಯಿಂದ ಇನ್ನೊಂದು ಚರ ಆಸ್ತಿಯ ಖಾತೆಗೆ ಹಣವನ್ನು ವರ್ಗಾಯಿಸಬಹುದು
29. ಆಂತರ್ಜಾಲದಲ್ಲಿ ಸಿಗುವ ಪ್ರಾಯೋಗಿಕ ಆವೃತ್ತಿಗೂ ಸಿಡಿ ಆವೃತ್ತಿಗೂ ಇರುವ ವ್ಯತ್ಯಾಸವೇನು?
ನಾವು ಸದುದ್ದೇಶದಿಂದ ಉಚಿತವಾಗಿ ಬಿಡುಗಡೆ ಮಾಡಿದ ಈ ತಂತ್ರಾಂಶವನ್ನು ಅಂತರ್ಜಾಲದಿಂದ ಡೌನ್ ಲೋಡ್ ಮಾಡಿಕೊಂಡು ಸಿಡಿಯಲ್ಲಿ ಕಾಪಿ ಮಾಡಿ, ಅವುಗಳನ್ನು ಶಾಲೆಗಳಿಗೆ ಹಂಚಿ, ಕೆಲವು ಮಧ್ಯವರ್ತಿಗಳು ಮುಖ್ಯೋಪಾಧ್ಯಾಯರಿಂದ ಹಣ ವಸೂಲಿ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿರುತ್ತದೆ. ಈ ರೀತಿ ಆಗಬಾರದೆಂದು ಶಾಲತಂತ್ರದ ಎರಡು ರೀತಿಯ ಆವೃತ್ತಿಗಳನ್ನು ಬಿಡುಗಡೆಮಾಡಲಾಗಿದೆ.
1. ಪ್ರಾಯೋಗಿಕ ಆವೃತ್ತಿ(Evaluation Copy). ಈ ಆವೃತ್ತಿಯಲ್ಲಿ ಕೆಳಗಿನ ನಿಬಂಧನೆಗಳು ಇರುತ್ತವೆ.
-
ಅಕೌಂಟಿಗ್
ಗೆ ಸಂಬಂಧಿಸಿದ
ಯಾವುದೇ ಸೌಲಭ್ಯಗಳನ್ನು/ಅಯ್ಕೆಗಳನ್ನು
ಒದಗಿಸಿರುವುದಿಲ್ಲ.
-
ಯಾವುದೇ
ವರದಿಯನ್ನು ಓಪನ್
ಆಫೀಸ್ ನ .ods
ರೂಪದಲ್ಲಿ
ಉಳಿಸಲು ಸಾಧ್ಯವಿಲ್ಲ.
-
ಪೂರ್ವನಿಗದಿತ
ನಿರ್ದಿಷ್ಟ
ಸಂಖ್ಯೆಯ ವಿದ್ಯಾರ್ಥಿಗಳ
ವಿವರಗಳನ್ನು
ಮಾತ್ರ ಸೇರಿಸಲು
ಸಾಧ್ಯ.
2. ಎಲ್ಲ ಸೌಲಭ್ಯಗಳಿರುವ ಆವೃತ್ತಿ.
ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗಾಗಿ ಅಭಿವೃದ್ಧಿಪಡಿಸಿರುವ www.eShale.org ತಾಣವನ್ನು ಲೇಖನ ಮತ್ತು ಪ್ರಶ್ನೋತ್ತರ ಸಲ್ಲಿಸುವ ಮೂಲಕ ಸಮೃದ್ಧಿಗೊಳಿಸಿದಲ್ಲಿ ಉಚಿತವಾಗಿ ಅಥವಾ ನಿರ್ದಿಷ್ಟ ಬೆಲೆ ನೀಡಿ ಸಿಡಿ ಮೂಲಕ ಪಡೆಯಬಹುದು.
30. ಅನ್ ಲಾಕ್ ಕೋಡ್ ಎಂದರೆ ಏನು ಮತ್ತು ಅದನ್ನು ಹೇಗೆ ಪಡೆಯಬಹುದು?
ಮೇಲೆ ತಿಳಿಸಿದ ಕಾರಣದಿಂದ(ಪೈರೆಸಿ) ಎಲ್ಲ ಸೌಲಭ್ಯಗಳಿರುವ ಆವೃತ್ತಿಯನ್ನು ಬಳಸಲು, ಅನ್ ಲಾಕ್ ಕೋಡ್ ಎನ್ನುವ ಸಂಕೇತದ ಅಗತ್ಯವಿರುತ್ತದೆ. ನೀವು ಸಿಡಿಯನ್ನು ಪಡೆದ ಮೇಲೆ ನಿಮ್ಮ ಶಾಲೆಯ ಹೆಸರು, ಪಿನ್ ಕೋಡ್ ಹಾಗೂ ನಿಮ್ಮ ಶಾಲೆಯಲ್ಲಿನ ತರಗತಿಗಳ ವಿವರಗಳನ್ನು(ಎಷ್ಟರಿಂದ ಎಷ್ಟರವರೆಗೆ) ನಮಗೆ ನೀಡಿದರೆ, ನಿಮ್ಮ ಶಾಲೆಗಾಗಿ ಒಂದು ಅನ್ ಲಾಕ್ ಕೋಡ್ ನ್ನು ನೀಡಲಾಗುತ್ತದೆ.ಆದನ್ನು ಶಾಲೆ ಸ್ಕ್ರೀನ್ ನಲ್ಲಿ ನೀಡಬೇಕು. ಸರಿಯಾಗಿ ಕೋಡ್ ನ್ನು ಇಲ್ಲಿ ನೀಡಿದಲ್ಲಿ ಶಾಲಾತಂತ್ರವನ್ನು ಬಳಸಲು ಸಾಧ್ಯವಾಗುತ್ತದೆ.